ಜಳಾವಿಗೆ  -
ವೈದ್ಯಕೀಯ ಉಪಕರಣಾದಿಗಳನ್ನು ಕ್ರಿಮಿಶುದ್ಧಗೊಳಿಸಲು ಬಳಸುವ ಸಾಧನ.  (ಆಟೋಕ್ಲೇವ್).  ಮುಚ್ಚಿದ ಲೋಹದ ಪಾತ್ರೆಯೊಳಗಣ ಒತ್ತಡ ಏರಿಸಿ, ನೀರು ಕುದಿಯುವ ಉಷ್ಣತೆಯನ್ನು 100ºಛಿ ಗಿಂತ ಹೆಚ್ಚು ಏರಿಸುವುದೇ ಈ ಕ್ರಿಮಿಶುದ್ಧಿ ಸಾಧನದ ಮೂಲತತ್ತ್ವ.  ಜಳಾವಿಗೆ ಉದ್ದವಾದ ಒಂದು ಲೋಹಪಾತ್ರೆ.  ಇದರ ಮೇಲುಭಾಗದಲ್ಲಿ ದಪ್ಪ ಮುಚ್ಚಳ ಉಂಟು. ಅದು ಬಿಗಿಯಾಗಿ ಕೂರಬಲ್ಲದು.  ಒತ್ತಡ ಮಿತಿಮೀರಿದಾಗ ಆವಿ ಹೊರಹೋಗಲೂ ಇದರಲ್ಲಿ ಏರ್ಪಾಡು ಉಂಟು.  ಪಾತ್ರೆಯಲ್ಲಿ ಎರಡು ಭಾಗಗಳಿವೆ.  ಮಧ್ಯದಲ್ಲಿ ತೂತಿನ ತಟ್ಟೆಯಿದೆ.  ಕೆಳ ಪಾತ್ರೆಯಲ್ಲಿ ಸುಮಾರು 4 ಇಂಚಿನಷ್ಟು ಎತ್ತರ ನೀರು ಇರಬೇಕು.  ತೂತಿನ ತಟ್ಟೆಯ ಮೇಲುಭಾಗದಲ್ಲಿ ಕ್ರಿಮಿಶುದ್ಧ ಮಾಡುವ ಉಪಕರಣಗಳನ್ನು ಇಟ್ಟು ಪಾತ್ರೆಯ ಕೆಳಭಾಗವನ್ನು ಕಾಯಿಸಿದಾಗ ನೀರು ಕುದಿಯುತ್ತದೆ.   ಪಾತ್ರೆಯೊಳಗಣ ಉಷ್ಣತೆ ಕುದಿಬಿಂದುವಿಗಿಂತ ಹೆಚ್ಚಾದಾಗ ಸೂಕ್ಷ್ಮಾಣುಗಳು ಸುಮಾರು 10 ಮಿನಿಟುಗಳಲ್ಲಿ ನಾಶವಾಗುತ್ತವೆ.  5 ಪೌಂಡಿನ ಒತ್ತಡ ಹಾಕಿದಾಗ ನೀರು 109ºಅ  ನಲ್ಲಿ ಕುದಿಯುತ್ತದೆ.  ಈ ಒತ್ತಡ ಬರಲು 30 ಮಿನಿಟು ಕಾಯಬೇಕಾಗುತ್ತದೆ.  ಅಷ್ಟರಲ್ಲಿ ಒಳಗಿನ ವಸ್ತುಗಳೆಲ್ಲ ಕ್ರಿಮಿಮುಕ್ತವಾಗುತ್ತವೆ.

ಶಬ್ದಾರ್ಥದ ಪ್ರಕಾರ ಜಳಾವಿಗೆ ಎಂದರೆ ಪಾತ್ರೆಯೊಳಗಣ ಒತ್ತಡದಿಂದಲೇ ಮುಚ್ಚಳ ಭದ್ರವಾಗಿ ನಿಲ್ಲುವಂಥದು ಎಂದು.  ಜಳಾವಿಗೆಯ ಪ್ರತಿರೂಪ ಡೆನಿಸ್ ಪಪೇನ್ 1679ರಲ್ಲಿ ಸಂಶೋಧನೆ ಮಾಡಿದ ಆವಿಗೆ.  ಸಂಮರ್ದ ಪಾಕಕಾರಿಯ (ಪ್ರೆಷರ್ ಕುಕರ್) ರೂಪದಲ್ಲಿ ಇದು ಈಗಲೂ ಬಳಕೆಯಲ್ಲಿದೆ.  ಸಂಮರ್ದ ಪಾಕಕಾರಿಯಲ್ಲಿ ದುಂಡಗಿನ ಪಾತ್ರೆಯ ತಳದಲ್ಲಿ ನೀರಿಟ್ಟು ಮೇಲುಭಾಗದಲ್ಲಿ ಬೇಯಿಸಬೇಕಾದ ತರಕಾರಿ ಅಕ್ಕಿ ಮುಂತಾದವನ್ನು ಇಡಬಹುದು.  ರಬ್ಬರಿನ ಗ್ಯಾಸ್ಕೆಟ್ ಇರುವ ಮುಚ್ಚಳದಿಂದ ಪಾಕಕಾರಿಯನ್ನು ಮುಚ್ಚಲಾಗುತ್ತದೆ.  ಉರಿ ಹಾಕಿದಾಗ ಪಾತ್ರೆಯೊಳಗಣ ವಾಯುವೆಲ್ಲ ಮೇಲಿನ ತೂತಿನಿಂದ ಹೊರದೂಡಲ್ಪಡುವುದು.  ತರುವಾಯ ಅಗತ್ಯವಿರುವ ತೂಕವನ್ನು ಮೇಲಿನ ತೂತಿನ ಮೇಲೆ ಹೇರಬೇಕು.  ಪಾತ್ರೆಯೊಳಗಿನ ಒತ್ತಡ ಹೆಚ್ಚಿ ಕುದಿಬಿಂದು ಏರಿ ಅನತಿಕಾಲದಲ್ಲಿಯೇ ಒಳಗಿನ ವಸ್ತುಗಳು ಬೆಂದಮೇಲೆ ಶಿಳ್ಳೆ ಕೇಳಿಸುತ್ತದೆ.  ಆಗ ಉರಿ ಆರಿಸಬಹುದು.  ಪಾಕಕಾರಿಯ ಮುಚ್ಚಳ ತೆಗೆಯಲು ಸ್ವಲ್ಪಕಾಲ ಕಾಯಬೇಕು. ಹೊರಗಿನ ಹಾಗೂ ಒಳಗಿನ ವಾತಾವರಣದ ಒತ್ತಡ ಒಂದೇ ಆದಾಗ ಮುಚ್ಚಳ ತೆಗೆದು ಬೆಂದ ವಸ್ತುಗಳನ್ನು ಹೊರಗೆ ತೆಗೆದುಕೊಳ್ಳಬಹುದು.
(ಎ.ಎನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ